Bihar Election 
ದೇಶ

ಯುವಕರು ಆಸೆ, ಆಕಾಂಕ್ಷೆ, ಕನಸುಗಳು ಜಂಗಲ್ ರಾಜ್‌ನ ಕೋಮುವಾದದ ಸೂತ್ರವನ್ನೇ ಛಿದ್ರಗೊಳಿಸಿವೆ: ಪ್ರಧಾನಿ ನರೇಂದ್ರ ಮೋದಿ | NarendraModi

ದೆಹಲಿ: ಬಿಹಾರದಲ್ಲಿ ಇನ್ನು ಮುಂದೆ ಜಂಗಲ್​ ರಾಜ್​ ಸರ್ಕಾರ ಅಧಿಕಾರಕ್ಕೆ ಬರಲ್ಲ, ರಾಜ್ಯದ ಜನರು ಇಲ್ಲಿಂದಲೇ ಇಡೀ ದೇಶಕ್ಕೆ ಸಂದೇಶ ನೀಡಿದ್ದು, ಮಹಿಳೆಯರ, ಯುವಕರ ಕನಸ್ಸಿನಂತೆ ಈ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2025 ರ ಬಿಹಾರ ಚುನಾವಣೆಯ ದೊಡ್ಡ ಗೆಲುವು, ಪಕ್ಷ ಮತ್ತು ಜನರ ಎನ್‌ಡಿಎ ಸರ್ಕಾರದ ಮೇಲಿಟ್ಟಿರುವ ನಂಬಿಕೆಯ ಫಲಿತಾಂಶ. ಕಟ್ಟಾ ಸರ್ಕಾರ್ ಎಂದಿಗೂ ಹಿಂತಿರುಗುವುದಿಲ್ಲ, ಭವಿಷ್ಯದಲ್ಲಿ ರಾಜ್ಯವು ಅಭೂತಪೂರ್ವ ಬೆಳವಣಿಗೆ ಹೊಂದಲಿದೆ ಎಂದು ಭರವಸೆ ನೀಡಿದರು.
ನಾನು ಚುನಾವಣೆ ಪ್ರಚಾರ ಸಮಯದಲ್ಲಿ ಜಂಗಲ್ ರಾಜ್ ಮತ್ತು ಕಟ್ಟಾ ಸರ್ಕಾರ್ ಬಗ್ಗೆ ಟೀಕಿಸಿ ಮಾತನಾಡುತ್ತಿದ್ದಾಗ, ಆರ್‌ಜೆಡಿ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಇದು ಕಾಂಗ್ರೆಸ್​ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
2010 ರ ಬಳಿಕ ಬಿಹಾರವು ಎನ್​ಡಿಎ ಮೈತ್ರಿಕೂಟಕ್ಕೆ ದೊಡ್ಡ ಜನಾದೇಶವನ್ನು ನೀಡಿದೆ, ಎಲ್ಲಾ ಮಿತ್ರಪಕ್ಷಗಳ ಪರವಾಗಿ ಬಿಹಾರದ ಜನರು ನೀಡಿದ ಬೆಂಬಲಕ್ಕೆ ಧನ್ಯವಾಧ ತಿಳಿಸಿದ ಪ್ರಧಾನಿ, ಇಂದು ಬಿಹಾರವು ದೇಶದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ, ಇದರಲ್ಲಿ ಪ್ರತಿಯೊಂದು ಧರ್ಮ ಮತ್ತು ಜಾತಿಯ ಯುವಕರು ಸೇರಿದ್ದಾರೆ. ಅವರ ಆಸೆಗಳು, ಆಕಾಂಕ್ಷೆಗಳು ಮತ್ತು ಕನಸುಗಳು ಜಂಗಲ್ ರಾಜ್‌ನ ಹಳೆಯ, ಕೋಮುವಾದದ ಸೂತ್ರವನ್ನೇ ಛಿದ್ರಗೊಳಿಸಿವೆ ಎಂದರು.
ಬಿಹಾರದ ಮತದಾರರು ಅಭಿವೃದ್ಧಿ ಹೊಂದಿದ ಬಿಹಾರಕ್ಕೆ ಮತ ಹಾಕಿದ್ದಾರೆ, ಸಮೃದ್ಧ ಬಿಹಾರಕ್ಕೆ ಮತ ಹಾಕಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ದಾಖಲೆಯ ಮತದಾನಕ್ಕಾಗಿ ಒತ್ತಾಯಿಸಿದ್ದೆ, ಅವರು ನನ್ನ ಮಾತಿನಂತೆ ನಡೆದುಕೊಂಡು ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಛಠಿ ಮೈಯಾಗೆ ಅವಮಾನಿಸಿದ್ದಕ್ಕೆ ಕ್ಷಮೆಯಾಚಿಸಿಲ್ಲ. ರಾಜ್ಯದ ಜನ ಆ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ. ಬಿಹಾರದ ಹೆಮ್ಮೆ ಮತ್ತು ಗೌರವ ನಮ್ಮ ಮೊದಲ ಆದ್ಯತೆ ಎಂದರು.
ಈ ದೊಡ್ಡ ಮಟ್ಟದ ಫಲಿತಾಂಶ ಹೊರ ಹೊಮ್ಮಲು ಮಹಿಳೆಯರು ಮತ್ತು ಯುವಕರ ಪಾತ್ರ ದೊಡ್ಡದಿದ್ದು, ಬಿಹಾರದ ಕೆಲವು ಪಕ್ಷಗಳು 'ಎಂವೈ' ( ಮುಸ್ಲಿಂ, ಯಾದವ್​ ) ಎಂಬ ಓಲೈಕೆ ಸೂತ್ರಕ್ಕೆ ಜೋತು ಬಿದ್ದವು, ನಮ್ಮ ಹೊಸ 'ಎಂವೈ' (ಮಹಿಳೆಯರು, ಯುವಕರು) ಸೂತ್ರ ನಮ್ಮ ಮೇಲೆ ಭರವಸೆ ಇಟ್ಟಿದ್ದು, ಅದನ್ನು ನೂತನ ಸರ್ಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದರು.
ನಾವು ಜನರ ಸೇವಕರು. ನಮ್ಮ ಕಠಿಣ ಪರಿಶ್ರಮದಿಂದ ಜನರನ್ನು ಸಂತೋಷಪಡಿಸುತ್ತಲೇ ಇರುತ್ತೇವೆ ಮತ್ತು ಜನರ ಹೃದಯಗಳನ್ನು ಕದ್ದಿದ್ದೇವೆ. ಅದಕ್ಕಾಗಿಯೇ ಇಡೀ ಬಿಹಾರ 'ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್' ಎಂದು ಹೇಳಿದೆ. ಭಾರತದ ಅಭಿವೃದ್ಧಿಯಲ್ಲಿ ಬಿಹಾರದ ಜನರ ಪಾತ್ರ ದೊಡ್ಡದಿದ್ದು, ದಶಕಗಳ ಕಾಲ ದೇಶವನ್ನಾಳಿದವರು ಯಾವಾಗಲೂ ಬಿಹಾರದ ಬಗ್ಗೆ ಸುಳ್ಳುಗಳನ್ನೇ ಹೇಳಿದ್ದಾರೆ ಎಂದು ತಿಳಿಸಿದರು.